ಮಂಗಳೂರಿನ ನಗರದಲ್ಲಿ ಬ್ಯಾನರ್ ಹಾವಳಿ ಮಿತಿ ಮೀರಿದೆ. ಈ ದೈತ್ಯ ಬ್ಯಾನರ್ ಗಳು, ಫ್ಲೆಕ್ಸ್ ಗಳು ಸಾರ್ವಜನಿಕರ ಜೀವಕ್ಕೂ, ವಾಹನಗಳಿಗೂ ಅಪಾಯವನ್ನು ತಂದೊಡ್ಡುತ್ತವೆ. ಈ ಬ್ಯಾನರ್ಗಳ ಹಾವಳಿ ಮಿತಿಮೀರುತ್ತಿದ್ದಂತೆ ಅವುಗಳ ನಿಯಂತ್ರಣಕ್ಕೆ ಮಂಗಳೂರು ನಗರ ಪಾಲಿಕೆ ತೆರವು ಕಾರ್ಯಚರಣೆಯನ್ನು ನಡೆಸಿದೆ. ಹಾಗೆಯೇ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದ ಲಾಲ್ಬಾಗ್ ಪಂಪ್ ವೆಲ್ ಜಂಕ್ಷನ್ ಗಳನ್ನು ಬ್ಯಾನರ್ ಮುಕ್ತವಾಗಿಸುವಲ್ಲಿ ಪಾಲಿಕೆ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಈ ಬ್ಯಾನರ್ಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಲು ದಂಡ ವಿಧಿಸುವ ಯೋಜನೆಗೆ ಪಾಲಿಕೆ ಸಜ್ಜಾಗುತ್ತಿದೆ. ಈ ರೀತಿಯ ಬ್ಯಾನರ್ ಗಳನ್ನು ಮುದ್ರಿಸುವಂತಹ ಮುದ್ರಕರಿಗೂ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಪಾಲಿಕೆಯು ತಯಾರಿ ನಡೆಸುತ್ತಿದೆ. ಮಂಗಳೂರು ನಗರ ಪಾಲಿಕೆಯ ಈ ಕಾರ್ಯಕ್ಕೆ ಜಿಲ್ಲಾಡಳಿತವು ಬೆಂಗಾವಲಾಗಿ ನಿಂತಿದೆ.
ಮಂಗಳೂರು ಸೇರಿದಂತೆ ಎಲ್ಲಾ ಕಡೆಯ ಮುಖ್ಯ ರಸ್ತೆ, ಜಂಕ್ಷನ್ ಗಳಲ್ಲಿ ಅಳವಡಿಸಿರುವ ಪ್ಲಾಸ್ಟಿಕ್ ಫ್ಲೆಕ್ಸ್ ಗಳು, ಬ್ಯಾನರ್ಗಳು ರಸ್ತೆಗೆ ಬೀಳುವುದು, ವಾಹನ ಸವಾರರ ಮೇಲೆ ಅಥವಾ ರಸ್ತೆ ಬದಿ ನಿಲ್ಲಿಸಿದ ವಾಹನಗಳ ಮೇಲೆ ಬೀಳುವಂತಹ ಅನಾಹುತಗಳಿಗೆ ಕಾರಣವಾಗುತ್ತಲೇ ಇರುತ್ತವೆ. ಈ ಸಮಸ್ಯೆಗಳಿಂದಾಗಿ ಬ್ಯಾನರ್ಗಳ ಮೇಲೆ ನಿಯಂತ್ರಣ ಅತ್ಯಗತ್ಯ ಎಂಬುದು ಜಿಲ್ಲಾಡಳಿತದ ಅಭಿಪ್ರಾಯ. ಈ ಬ್ಯಾನರ್ಗಳ ವಿಚಾರದಲ್ಲಿ ಸ್ಥಳಿಯಾಡಳಿತಗಳು ನೀಡುವಂತಹ ಸೂಚನೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದ್ದಾರೆ.
ಬ್ಯಾನರ್, ಫ್ಲೆಕ್ಸ್ಗಳ ವಿಷಯದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ ಅವುಗಳ ನಿಯಂತ್ರಣಕ್ಕೆ ಸ್ಥಳಿಯಾಡಳಿತವು ಕ್ರಮ ವಹಿಸಲಿದೆ. ಸ್ಥಳೀಯ ಆಡಳಿತಗಳ ಕ್ರಮಕ್ಕೆ ಕಿವಿಗೊಡದೆ ಹೋದರೆ ಪೊಲೀಸ್ ಇಲಾಖೆಗೆ ದೂರು ನೀಡುವ ಮೂಲಕ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರು ನೀಡುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಜಿಲ್ಲಾಡಳಿತವು ಎಚ್ಚರಿಕೆ ನೀಡಿದೆ.
0 Comments