ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ

ರಾಜ್ಯದಲ್ಲಿನ ಎಲ್ಲಾ ಪ್ರೌಢಶಾಲಾ 2025 26ನೇ ಶೈಕ್ಷಣಿಕ ವರ್ಷದಿಂದ ವಾರದಲ್ಲಿನ ಎರಡು ಪಠ್ಯ ಅವಧಿಯಲ್ಲಿ ನೈತಿಕ ಮೌಲ್ಯಾಧಾರಿತ ಶಿಕ್ಷಣ ಭೋದನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ವಿಧಾನ ಪರಿಷತ್ತಿನಲ್ಲಿ ತೀರ್ಮಾನಿಸಲಾಗಿದೆ. ಅದರ ಜೊತೆಯಲ್ಲೇ ನೈತಿಕ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇತ್ತೀಚೆಗೆ ವಿಧಾನಪರಿಷತ್ತಿನಲ್ಲಿ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಸುಧೀರ್ಘವಾದ ಚರ್ಚೆ ನಡೆದಿತ್ತು. ಆಡಳಿತ ಮತ್ತು ಪ್ರತಿಪಕ್ಷಗಳ ಅನೇಕ ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಸರಕಾರಕ್ಕೆ ನೀಡಿದ್ದರು.

ಇತ್ತೀಚಿನ ದಿನಗಳಲ್ಲಿ ನೈತಿಕ ಶಿಕ್ಷಣದ ಕೊರತೆ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ಹದಿಹರೆಯದ ಮಕ್ಕಳಲ್ಲಿ ತಮ್ಮ ವಯಸ್ಸಿಗನುಗುಣವಾಗಿ ಲೈಂಗಿಕ ಶಿಕ್ಷಣದ ಜ್ಞಾನವು ಕುಂಠಿತವಾಗಿದೆ. ಆದ್ದರಿಂದ ನೈತಿಕ ಮೌಲ್ಯಾಧಾರಿತ ಶಿಕ್ಷಣದ ಜೊತೆಯಲ್ಲಿ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ 8ನೇ ತರಗತಿಯಿಂದ 12ನೇ ತರಗತಿ ಮಕ್ಕಳಿಗೆ ಕಡ್ಡಾಯವಾಗಿ ವಾರದಲ್ಲಿ ಎರಡು ದಿನ ಲೈಂಗಿಕ ಶಿಕ್ಷಣ ನೀಡಲಾಗುವುದು. ಲೈಂಗಿಕ ಶಿಕ್ಷಣವೆಂದರೆ ತಪ್ಪಾಗಿ ಭಾವಿಸುವ ಹಾಗಿಲ್ಲ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನು, ಸಹಜವಾಗಿ ಹಾಗೂ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಬಗ್ಗೆ ತಿಳುವಳಿಕೆ ನೀಡುವುದು ಎಂದು ವಿವರಣೆ ನೀಡಿದ್ದಾರೆ.

Post a Comment

0 Comments