ಆಧುನಿಕರಣ ಹೆಚ್ಚಾದಂತೆ ಸೈಬರ್ ಅಸುರಕ್ಷತೆ ಎಲ್ಲೆಡೆ ತಾಂಡವವಾಡುತ್ತಿದೆ. ಸೈಬರ್ ವಂಚಕರ ಜಾಲ ದಿನೇ ದಿನೇ ಹೆಚ್ಚುತ್ತಿದ್ದು ಯಾವುದೇ ಬ್ಯಾಂಕು ವ್ಯವಹಾರಗಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಆದ್ದರಿಂದ ಸೈಬರ್ ಭದ್ರತೆಗಾಗಿ ಭಾರತೀಯ ಬ್ಯಾಂಕುಗಳಿಗೆ bank.in ಎಂಬ ಪ್ರತ್ಯೇಕ ಜಾಲತಾಣ ತೆರೆಯಲು ಆರ್‌ಬಿಐ ನಿರ್ಧರಿಸಿದೆ. ಹಾಗೆಯೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ fin.in ಎಂಬ ಡೊಮೇನ್ ಇರಲಿದೆ.
ಭಾರತೀಯ ಬ್ಯಾಂಕುಗಳಿಗೆ ಸಂಬಂಧಿಸಿದಂತೆ bank.in ಜಾಲತಾಣದಲ್ಲಿ 2025ರ ಏಪ್ರಿಲ್ ನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ fin.in ಜಾಲತಾಣವನ್ನೂ ತೆರೆಯಲಾಗುತ್ತದೆ. ಈ ಆರ್ಥಿಕ ವರ್ಷದ ದ್ವೈಮಾಸಿಕ ಹಣಕಾಸು ನೀತಿಗಳ ಬಗ್ಗೆ ಮಾತನಾಡಿರುವ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಡಿಜಿಟಲ್ ಪಾವತಿಗಳಲ್ಲಿ ಹೆಚ್ಚುತ್ತಿರುವ ವಂಚನೆ ಕಳವಳಕಾರಿಯಾಗಿದೆ. ಇದನ್ನು ತೊಡೆದು ಹಾಕಲು ಬ್ಯಾಂಕುಗಳಿಗೆ ಪ್ರತ್ಯೇಕ ಡೊಮೇನ್ ತೆರೆಯಲು ಆರ್‌ಬಿಐ ನಿರ್ಧರಿಸಿದೆ. ಈ ನಿರ್ಧಾರವು ಭಾರತೀಯ ಹಣಕಾಸು ಕ್ಷೇತ್ರದಲ್ಲಿ ನಂಬಿಕೆ ಹೆಚ್ಚಿಸುತ್ತದೆ ಮತ್ತು ಸೈಬರ್ ಬೆದರಿಕೆ, ವಂಚನೆಗಳಂತಹ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರುವ ಗುರಿಯನ್ನು ಹೊಂದಿದೆ. ಇದು ಎಲ್ಲಾ ರೀತಿಯ ಹಣಕಾಸು ಸೇವೆಗಳನ್ನು ಸುರಕ್ಷಿತಗೊಳಿಸುತ್ತದೆ. ಆದ್ದರಿಂದ ಡಿಜಿಟಲ್ ಬ್ಯಾಂಕಿಂಗ್ ಮತ್ತು ಪಾವತಿ ಸೇವೆಗಳಲ್ಲಿ ಜನರ ನಂಬಿಕೆಯು ಹೆಚ್ಚಾಗುತ್ತದೆ. ಇದಕ್ಕೆ ಇನ್ಸ್ಟಿಟ್ಯೂಟ್ ಫಾರ್ ಡೆವಲಪ್ಮೆಂಟ್ ಅಂಡ್ ರಿಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ(ಐ.ಡಿ.ಆರ್.ಬಿ.ಟಿ)ವಿಶೇಷ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಮಲ್ಹೋತ್ರ ತಿಳಿಸಿದ್ದಾರೆ.
0 Comments