ಮುಂದಿನ ವರ್ಷದ ಪದವಿ ಪೂರ್ವ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ಪದವಿ ಪೂರ್ವ ಶಿಕ್ಷಣ ಇಲಾಖೆಯು ಮುಂಬರುವ 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಜೂನ್ 2ರಿಂದ ಆರಂಭವಾಗಲಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ಮೊದಲ ಕಾರ್ಯನಿರತ ದಿನದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗಲಿದೆ. ಹಾಗೆಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯು ಮೇ 22 ರಿಂದ ಆರಂಭವಾಗಲಿದೆ. 
ಜೂನ್ 2 ರಿಂದ ಸೆಪ್ಟೆಂಬರ್ 21ರವರೆಗೆ ಮೊದಲನೇ ಸೆಮಿಸ್ಟರ್ ಅವಧಿ ಇರಲಿದ್ದು, ಅಕ್ಟೋಬರ್ 8 ರಿಂದ 2026 ಮಾರ್ಚ್ 31ರವರೆಗೆ ಎರಡನೇ ಸೆಮಿಸ್ಟರ್ ಅವಧಿ ನಡೆಯಲಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ವಿದ್ಯಾರ್ಥಿಗಳಿಗೆ ಮಧ್ಯಂತರ ಅವಧಿ ರಜೆ ಇರಲಿದೆ. ಹಾಗೆಯೇ ಜೂನ್ 16 ರಿಂದ ಪ್ರಾಯೋಗಿಕ ತರಗತಿಗಳೂ ಆರಂಭವಾಗಲಿದೆ. ಪ್ರಥಮ ಕಿರು ಪರೀಕ್ಷೆಯು ಆಗಸ್ಟ್ 11ರಿಂದ 14ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳ ಮೊದಲನೇ ಹಾಜರಾತಿ ಕೊರತೆ ಪಟ್ಟಿಯನ್ನು ಸೆಪ್ಟೆಂಬರ್ 12ರಂದು ಪ್ರಕಟಿಸಿ ಪೋಷಕರಿಗೆ ಮಾಹಿತಿ ನೀಡಲಾಗುವುದು. ಜೊತೆಯಲ್ಲಿ ಸೆಪ್ಟೆಂಬರ್ 16ರಂದು ಪೋಷಕರು ಮತ್ತು ಉಪನ್ಯಾಸಕರ ಸಭೆ ನಿಗದಿಪಡಿಸಲಾಗಿದೆ. ಮಧ್ಯ ವಾರ್ಷಿಕ ಪರೀಕ್ಷೆಯು ಅಕ್ಟೋಬರ್ 9ರಿಂದ 27ರವರೆಗೆ ನಡೆಯಲಿದ್ದು, ಡಿಸೆಂಬರ್ 11ರಂದು 2ನೇ ಹಾಜರಾತಿ ಕೊರತೆ ಪಟ್ಟಿ ಪ್ರಕಟಿಸಿ ಪೋಷಕರಿಗೆ ಮಾಹಿತಿ ನೀಡುವುದು. ಡಿಸೆಂಬರ್ 16 ಪೋಷಕ-ಉಪನ್ಯಾಸಕ ಸಭೆ ನಿಗದಿಪಡಿಸಲಾಗಿದೆ.

ಡಿಸೆಂಬರ್ 19ರಿಂದ 22ರವರೆಗೆ 2ನೇ ಕಿರು ಪರೀಕ್ಷೆ, 2026ರ ಜನವರಿ 2ರಿಂದ 13ರವರೆಗೆ ಪ್ರಥಮ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು, ಜನವರಿ 16ರಂದು ಹಾಜರಾತಿ ಕೊರತೆಯನ್ನು ಕಡ್ಡಾಯವಾಗಿ ಪೋಷಕರ ಗಮನಕ್ಕೆ ತರುವುದು, ಜನವರಿ 20ರಂದು ಪೋಷಕ-ಉಪನ್ಯಾಸಕ ಸಭೆಯನ್ನು ನಿಗದಿಪಡಿಸಲಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆಗಳು ಜನವರಿ 5ರಿಂದ 20ರವರೆಗೆ ನಡೆಯಲಿದ್ದು, ಜನವರಿ 21ರಿಂದ ಫೆಬ್ರವರಿ 14ರವರೆಗೆ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು, ಫೆಬ್ರವರಿ 10ರಿಂದ 25ರವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು, ಫೆಬ್ರವರಿ 26ರಿಂದ ಮಾರ್ಚ್ 21ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 31ರಂದು ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ.




Post a Comment

0 Comments