ಗೂಗಲ್ ನ 2ನೇ ದೊಡ್ಡ ಕಛೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಇದೀಗ ಜಗತ್ತಿನ ಪ್ರಸಿದ್ಧ ಕಂಪನಿಗಳಲ್ಲಿ ಒಂದಾಗಿರುವ "ಗೂಗಲ್" ತನ್ನ 2ನೇ ಕಛೇರಿಯನ್ನು ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ. ಬೆಂಗಳೂರು ನಗರದ ಹೊರವಲಯದಲ್ಲಿರುವ ಮಹಾದೇವಪುರದಲ್ಲಿ ಗೂಗಲ್ ಕಂಪನಿಯ ಎರಡನೇ ಕಛೇರಿ ತಲೆಯೆತ್ತಿದೆ. ಗೂಗಲ್ ಕಂಪನಿಯ ಪ್ರಧಾನ ಕಛೇರಿ ಕ್ಯಾಲಿಫೋರ್ನಿಯಾದಲ್ಲಿದ್ದು, ಇದರ ನಂತರದ ಎರಡನೇ ಕಛೇರಿಯು ಮಹದೇವಪುರದ್ದಾಗಿದೆ.
ಗೂಗಲ್ ಜಗತ್ತಿನ ಬೃಹತ್ ಕಂಪನಿಗಳಲ್ಲಿ ಒಂದಾಗಿದ್ದು, ಬೆಂಗಳೂರಿನ ಎರಡನೇ ಕ್ಯಾಂಪಸ್ ಗೆ ಗೂಗಲ್ "ಅನಂತ" ಎಂದು ಹೆಸರಿಟ್ಟಿದೆ. ಅನಂತ ಎಂದರೆ ಸಂಸ್ಕೃತದಲ್ಲಿ ಅಪರಿಮಿತ ಎಂದರ್ಥ. ಇದು ದೇಶದ ಡಿಜಿಟಲ್, ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುವ ವಿಶ್ವಾಸವನ್ನು ಹೊಂದಿದೆ. ಅನಂತ ಕ್ಯಾಂಪಸ್ ಗೂಗಲ್ ಎರಡನೇ ಅತಿ ದೊಡ್ಡ ಕ್ಯಾಂಪಸ್ ಆಗಿದ್ದು, ಇದನ್ನು ನಿರ್ಮಿಸಲು ಬಾಗ್ಮನೆ ಟೆಕ್ ಪಾರ್ಕ್ ಗೆ ಆರು ವರ್ಷ ಸಮಯ ಹಿಡಿದಿದೆ. ಇದರ ಅಂತಿಮ ವಿನ್ಯಾಸಕ್ಕೆ ಸುಮಾರು 11 ತಿಂಗಳ ಅವಧಿ ಹಿಡಿದಿದೆ. ಈ ಕ್ಯಾಂಪಸ್ ಸುಮಾರು 1.6 ಮಿಲಿಯನ್ ಚದರ ಅಡಿ ವಿಸ್ತೀರ್ಣ ಕಟ್ಟಡದಲ್ಲಿ "ಗೂಗಲ್ ಅನಂತ" ತಲೆ ಎತ್ತಿ ನಿಂತಿದೆ. ಇದರಲ್ಲಿ ಸುಮಾರು 5,000 ಕ್ಕೂ ಹೆಚ್ಚು ತಂತ್ರಜ್ಞರಿಗೆ ಕಾರ್ಯನಿರ್ವಹಿಸಲು ಸ್ಥಳಾವಕಾಶವಿದೆ. ಸದ್ಯಕ್ಕೆ ಗೂಗಲ್ ಕಂಪನಿಯಲ್ಲಿ ಅಂದಾಜು 10,000 ಭಾರತೀಯ ಉದ್ಯೋಗಿಗಳಿದ್ದಾರೆ.

ಭಾರತವು ಪ್ರಪಂಚದೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ನೆಲೆಯೂರಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡಲು ಈ ಕ್ಯಾಂಪಸ್ ಮಹತ್ವದ ಪಾತ್ರವಹಿಸಲಿದೆ. ಗೂಗಲ್ ಕಂಪನಿಯು ಭಾರತದಲ್ಲಿ ಕ್ಯಾಂಪಸ್ ಆರಂಭಿಸುವ ಯೋಜನೆಯನ್ನು ಮೊದಲೇ ಹೊಂದಿತ್ತು. ತಂತ್ರಜ್ಞಾನಗಳನ್ನು ಬಹುಬೇಗ ಅಳವಡಿಸಿಕೊಳ್ಳುವ ಭಾರತದ ಮೇಲೆ ಗೂಗಲ್ ಹೆಚ್ಚು ಗಮನ ಕೇಂದ್ರೀಕರಿಸಿದೆ ಎಂದು ಗೂಗಲ್ ನ ಡೀಪ್ಮೈಂಡ್ ಉತ್ಪನ್ನ ಉಪಾಧ್ಯಕ್ಷ ಆನಂದ್ ರಂಗರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬೆಳವಣಿಗೆ ಅತ್ಯಂತ ವೇಗವಾಗಿದೆ. ಸಂಶೋಧನೆ, ಅಭಿವೃದ್ಧಿ, ಪಾಲುದಾರಿಕೆ ಇನ್ನಿತರ ರಂಗದಲ್ಲಿ ಮುಂಚೂಣಿಯಲ್ಲಿದೆ. ತಂತ್ರಜ್ಞಾನ ಪ್ರಗತಿ ಭಾಗವಾಗಿ, ಉತ್ತಮ ಪಾಲುಗಾರಿಕೆಯ ಭಾಗವಾಗಿ ಬೆಂಗಳೂರು ನಗರದಲ್ಲಿ ಕ್ಯಾಂಪಸ್ ತೆರೆಯಲಾಗಿದೆ. ಗೂಗಲ್ ಉತ್ಪನ್ನಗಳು, ಅವಕಾಶಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರನ್ನು ತಲುಪುವ ಉದ್ದೇಶವನ್ನು ಹೊಂದಲಾಗಿದೆ. ಭಾರತ ಸೇರಿದಂತೆ ಪ್ರಪಂಚ ಎದುರಿಸುತ್ತಿರುವ ಒಂದಷ್ಟು ಸಮಸ್ಯೆಗಳಿಗೆ 'ಅನಂತ್' ಪರಿಹಾರ ಒದಗಿಸಲಿದೆ. ಈ ನಿಟ್ಟಿನಲ್ಲಿ ಗೂಗಲ್ ವಿಶ್ವದ ಲಕ್ಷಾಂತರ ಬಳಕೆದಾರರು, ವ್ಯವಹಾರ, ವಲಯ, ಸ್ಟಾರ್ಟಪ್ಗಳನ್ನು ತಲುಪಲಿದೆ. ಆಂಡ್ರಾಯ್ಡ್, ಸರ್ಚ್, ಪ್ಲೇ, ಕ್ಲೌಡ್, ನಕ್ಷೆಗಳು ಮತ್ತು ಗೂಗಲ್ ಡೀಪ್ ಮೈಂಡ್ ಮುಂತಾದ ವಿವಿಧ ಗೂಗಲ್ ಘಟಕಗಳ ತಂಡಗಳು ಬೆಂಗಳೂರು ಗೂಗಲ್ ಕ್ಯಾಂಪಸ್ ಅಲ್ಲಿ ಕಾರ್ಯ ನಿರ್ವಹಿಸಲಿದೆ.


Post a Comment

0 Comments