ಗಿಗ್ ಕಾರ್ಮಿಕರೆಂದರೆ ಯಾರು?
2020ರ ಸಾಮಾಜಿಕ ಭದ್ರತಾ ಸಂಹಿತೆ ಪ್ರಕಾರ ಯಾವುದೇ ಕಂಪನಿಗಳಿಗೆ ಗುತ್ತಿಗೆ ಆಧಾರದಲ್ಲಿ ಬೇಡಿಕೆ ಆಧರಿಸಿ ದುಡಿಯುವವರನ್ನು ಗಿಗ್ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಮನೆಗಳಿಗೆ ಆಹಾರ ವಸ್ತುಗಳನ್ನು ತಲುಪಿಸುವ ಹಾಗೂ ಕ್ಯಾಬ್ ಸೇವೆ ಒದಗಿಸುವ ಕಂಪನಿಗಳ ಜೊತೆಗೆ ಕೆಲಸ ಮಾಡುವವರು ಈ ಕಾರ್ಮಿಕ ವರ್ಗಕ್ಕೆ ಸೇರುತ್ತಾರೆ. ಉಬರ್, ಓಲಾ, ಸ್ವಿಗ್ಗಿ, ಜೊಮ್ಯಾಟೋ ಸೇರಿದಂತೆ ವಿವಿಧ ಆನ್ಲೈನ್ ವೇದಿಕೆಗಳಲ್ಲಿ ದುಡಿಯುವವರು ಗಿಗ್ ಕಾರ್ಮಿಕರೆಂದು ಗುರುತಿಸಿಕೊಳ್ಳುತ್ತಾರೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿ.ಎಸ್.ಆರ್.ಡಿ.ಎ) ಗಿಗ್ ಕೆಲಸಗಾರರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸೇರ್ಪಡೆಗೊಳಿಸುವಂತೆ ಎರಡು ವರ್ಷದ ಹಿಂದೆಯೇ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಹಾಗೆಯೇ 2025-26 ನೇ ಸಾಲಿನ ಬಜೆಟ್ ನಲ್ಲಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕೆಲಸಗಾರರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕುರಿತು ಪ್ರಕಟಿಸಿದ್ದರು. ಗುರುತಿನ ಚೀಟಿ, ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ ನೋಂದಣಿಗೆ ಅವಕಾಶ ಕಲ್ಪಿಸುವ ಜೊತೆಗೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ಸೇವೆ ಒದಗಿಸುವ ಬಗ್ಗೆಯೂ ಭರವಸೆ ನೀಡಿದ್ದಾರೆ.
ದೇಶಾದ್ಯಂತ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಇ-ಶ್ರಮ್ ಇಷ್ಟ ಪೋರ್ಟಲ್ ಅನ್ನು 2021ರ ಆಗಸ್ಟ್ ತಿಂಗಳಲ್ಲೇ ರೂಪಿಸಲಾಗಿದೆ. ಇದರಡಿ ನೋಂದಣಿ ಆಗಿರುವ ಕಾರ್ಮಿಕರಿಗೆ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ನೀಡಲಾಗಿದೆ. ಗಿಗ್ ಕಾರ್ಮಿಕರು ಸಹ ಈ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಗಿಗ್ ಕಾರ್ಮಿಕರಿಗೆ ಪಿಂಚಣಿ ಯೋಜನೆಯಲ್ಲಿ ನೀಡುವ ಪಿಂಚಣಿ ಮೊತ್ತವನ್ನು ಯಾವ ರೀತಿ ಸರಕಾರ ಸಂಗ್ರಹಿಸುತ್ತದೆ ಎಂಬ ಬಗ್ಗೆ ಖಚಿತವಾಗಿ ಮಾಹಿತಿ ಹೊರಬಿದ್ದಿಲ್ಲ. ಈ ಕಾರ್ಮಿಕರ ವೇತನ ಮಿತಿ, ಪಿಂಚಣಿ ಮೊತ್ತ ಕಡಿತ ಈ ಬಗ್ಗೆ ಎಲ್ಲಾ ರೂಪುರೇಷೆಗಳು ಮುಂದಿನ ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ.
0 Comments