ನಿಖರ ವೈಜ್ಞಾನಿಕ ಆಸ್ತಿ ಸಮೀಕ್ಷೆಗಾಗಿ ನಕ್ಷಾ ಯೋಜನೆ

ರಾಜ್ಯದ ನಗರ ಪ್ರದೇಶಗಳ ಆಸ್ತಿ ದಾಖಲಾತಿ ವಿಧಾನ ಇನ್ನು ಮುಂದೆ ಸುಲಭವಾಗಿದೆ. ನಿಖರ ಹಾಗೂ ವೈಜ್ಞಾನಿಕ ಆಸ್ತಿ ಮಾಹಿತಿ ದಾಖಲೆಗಾಗಿ ನಕ್ಷಾ ಯೋಜನೆ ಎಂಬ ಹೊಸ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಭೂ ಸಂಪನ್ಮೂಲ ಇಲಾಖೆ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಇಂತಹ ಯೋಜನೆಯೊಂದು ಜಾರಿಗೊಳ್ಳಲಿದೆ. ಡ್ರೋನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಆಸ್ತಿಗಳ ಸಮೀಕ್ಷೆ ನಡೆಸಿ ಮಾಲೀಕರಿಗೆ ಪ್ರಾಪರ್ಟಿ ಕಾರ್ಡ್ ನೀಡಲಾಗುತ್ತದೆ.
ದೇಶದ 132 ಸ್ಥಳೀಯ ಸಂಸ್ಥೆಗಳು ಹಾಗೂ ರಾಜ್ಯದ 10 ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗಿದೆ. ರಾಜ್ಯದ ಬಾಗಲಕೋಟೆ, ಚಿಕ್ಕಮಗಳೂರು, ಗೋಕಾಕ, ಸಿರಗುಪ್ಪ, ಬಸವಕಲ್ಯಾಣ, ಕೋಲಾರ ನಗರಸಭೆಗಳು, ಆನವಟ್ಟಿ, ಬೋಗಾದಿ, ಬೋರಂಗಾವ್, ಭಾಗ್ಯನಗರ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಸ್ತಿಗಳ ಸಮೀಕ್ಷೆ ನಡೆಯಲಿದೆ. ಈ ಸಂಸ್ಥೆಗಳಲ್ಲಿ ಯೋಜನೆ ಯಶಸ್ವಿಯಾಗಿ ಜಾರಿಗೊಂಡರೆ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನವೂ ದೊರೆಯಲಿದೆ.

ನಕ್ಷಾ ಯೋಜನೆ ಎಂದರೇನು? 
"ನ್ಯಾಷನಲ್ ಜಿಯೋ ಸ್ಪ್ಯಾಟಿಯಲ್  ನಾಲೆಡ್ಜ್ ಬೇಸ್ಡ್ ಲ್ಯಾಂಡ್ ಸರ್ವೆ ಆಫ್ ಅರ್ಬನ್ ಹ್ಯಾಬಿಟೇಶನ್ಸ್ "ಇದು ನಕ್ಷ ಹೆಸರಿನ ವಿಸ್ತೃತ ರೂಪ. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಕಟ್ಟಡ, ನಿವೇಶನಗಳ ಮಾಲೀಕರಿಗೆ ನಿಖರ ದಾಖಲೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಡ್ರೋನ್, ವೈಡರ್, ಅಬ್ಲಿಕ್ಯೂಬ್ ಕ್ಯಾಮೆರಾಗಳನ್ನು ಬಳಸಿ ಕೇಂದ್ರ ಸರ್ವೆ ಇಲಾಖೆ ಸಮೀಕ್ಷೆ ನಡೆಸಲಿದೆ. ನಂತರ ಮಾಲೀಕರ ದಾಖಲೆ ಪರಿಶೀಲಿಸಿ ಪ್ರಾಪರ್ಟಿ ಕಾರ್ಡ್ ವಿತರಿಸಲಾಗುತ್ತದೆ. ಈ ಭೂ ದಾಖಲೆ ವೈಜ್ಞಾನಿಕವಾಗಿರಲಿದ್ದು, ತಂಟೆ-ತಕರಾರಿಗೆ ಅವಕಾಶ ಇರುವುದಿಲ್ಲ. ಆನ್ಲೈನ್ ನಲ್ಲಿ ದಾಖಲೆ ಲಭ್ಯವಾಗಲಿದೆ. 

ನಗರ ಪ್ರದೇಶದಲ್ಲಿ ನಿವೇಶನ, ಕಟ್ಟಡಗಳ ಗಡಿ ನಿರ್ಧಾರ ಬಹುತೇಕ ಬಾರಿ ವ್ಯಾಜ್ಯಗಳಿಗೆ ಕಾರಣವಾಗುತ್ತದೆ. ಗಡಿ ನಿಖರವಾಗಿ ಗುರುತಿಸಬಹುದಾಗಿದೆ. ಅತಿಕ್ರಮಣ ಮಾಡಿದ್ದರೆ ತಕ್ಷಣ ಗೊತ್ತಾಗುತ್ತದೆ. ಸರಕಾರಿ ಭೂಮಿಯ ಅತಿಕ್ರಮಣ, ಬೇರೆಯವರ ಹೆಸರಿನಲ್ಲಿ ಭೂಮಿ ಮಾರಾಟಕ್ಕೆ ಯೋಜನೆ ಬ್ರೇಕ್ ಹಾಕಲಿದೆ. ನಂತರ ಆಸ್ತಿ ದಾಖಲೆ ಅಕ್ರಮ ಮಾರ್ಪಾಡು, ಬೇರೆಯವರ ಹೆಸರಿನಲ್ಲಿ ಅನಧಿಕೃತವಾಗಿ ಬದಲಾಯಿಸಲು ಅವಕಾಶವಿರುವುದಿಲ್ಲ. ನಕ್ಷಾ ಯೋಜನೆಯಡಿ ಸ್ಥಳೀಯ ಸಂಸ್ಥೆಯಿಂದ ತೆರಿಗೆ ಪ್ರಮಾಣ ದಾಖಲಿಸಿದರೆ ಆಸ್ತಿ ತೆರಿಗೆ ಎಷ್ಟು ಎನ್ನುವುದು ಆನ್ಲೈನ್ ನಲ್ಲಿಯೇ ನೋಡಬಹುದಾಗಿದೆ. ಇದರಿಂದ ಆಸ್ತಿ ಮಾಲೀಕರು ಹಾಗೂ ಸ್ಥಳೀಯ ಸಂಸ್ಥೆಗಳ ಮಧ್ಯೆ ಸಂಘರ್ಷ ಇರುವುದಿಲ್ಲ.

Post a Comment

0 Comments