ರೆಪೊ ದರ 0.25% ಇಳಿಸಿದ ಆರ್.ಬಿ.ಐ


ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ನಲ್ಲಿ ಆದಾಯ ತೆರಿಗೆ ವಿನಾಯಿತಿ ಹೆಚ್ಚಳದ ಮೂಲಕ ಮಧ್ಯಮ ವರ್ಗದ ಜನತೆಗೆ ರಿಲೀಫ್ ನೀಡಿದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರ ಇಳಿಸುವ ಮೂಲಕ ಜನತೆಗೆ ಸಿಹಿ ಸುದ್ಧಿ ನೀಡಿದೆ. ಆರ್.ಬಿ.ಐ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಮಾಡಲಾಗಿದ್ದು, ಐದು ವರ್ಷಗಳ ನಂತರ ರೆಪೊ ದರವನ್ನು ಕಡಿತಗೊಳಿಸಲಾಗಿದೆ. ಈ ಮೂಲಕ ಗೃಹ, ವಾಹನ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರದ ಹೊರೆ ಕಡಿಮೆಯಾಗಲಿದೆ. 


ರೆಪೊ ದರ 0.25% ಕಡಿತಗೊಳಿಸಲಾಗಿದ್ದು ಇದರೊಂದಿಗೆ ರೆಪೊ ದರ 6.50%ರಿಂದ 6.25%ಕ್ಕೆ ಇಳಿಕೆಯಾಗಿದೆ ಎಂದು ಆರ್.ಬಿ.ಐ ನೂತನ ಗವರ್ನರ್ ಸಂಜಯ್ ಮಲ್ಹೋತ್ರ ಹೇಳಿದ್ದಾರೆ. ರೆಪೊ ದರ ಇಳಿಕೆಯ ಬೆನ್ನಲ್ಲೇ ಸಾಲದ ಮೇಲಿನ ಬಡ್ಡಿದರ ಕಡಿಮೆಯಾದರೂ ಠೇವಣಿ ಮೇಲಿನ ಆದಾಯವನ್ನೂ ಸಹ ಕಡಿಮೆ ಮಾಡುವ ಸಾಧ್ಯತೆ ಇದೆ.

ಸಂಜಯ್ ಮಲ್ಹೋತ್ರ ಆರ್‌ಬಿಐ ಗವರ್ನರ್ ಆಗಿ ಅಧಿಕಾರವಹಿಸಿಕೊಂಡ ನಂತರ ಹಾಗೂ 2025ನೇ ವರ್ಷದ ಮೊದಲ ಎಂಪಿಸಿ ಸಭೆ ಇದಾಗಿದ್ದು ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರೆಪೊ ದರವನ್ನು ಇಳಿಕೆ ಮಾಡಲಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿರುವ ಮಧ್ಯಮ ವರ್ಗದ ಜನತೆಯ ಮುಖದಲ್ಲಿ ರೆಪೊ ದರ ಇಳಿಕೆಯಿಂದ ಮಂದಹಾಸ ಮೂಡಿದೆ.

*ರೆಪೊ ದರ ಎಂದರೇನು?*
ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡಲು ಆರ್ ಬಿ ಐ ಇಂದ ಪಡೆಯುವ ಹಣದ ಮೇಲೆ ಆರ್‌ಬಿಐ ವಿಧಿಸುವ ಬಡ್ಡಿಯನ್ನು “ರೆಪೊ ದರ” ಎಂದು ಕರೆಯಲಾಗುತ್ತದೆ. ಆರ್ ಬಿ ಐ ರೆಪೋ ದರವನ್ನು ಇಳಿಸಿದಾಗ ಬ್ಯಾಂಕುಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ರೆಪೊ ದರ ಇಳಿಕೆಯಿಂದಾಗುವ ಈ ಪ್ರಯೋಜನವನ್ನು ಸ್ವಯಂ ಪ್ರೇರಿತವಾಗಿ ಸಾಲಗಾರರಿಗೆ ವರ್ಗಾಯಿಸಬಹುದಾದರೂ ಹಾಗೆ ಮಾಡುವುದಿಲ್ಲ. ಗ್ರಾಹಕರು ಬಡ್ಡಿದರ ಇಳಿಕೆಗೆ ಮನವಿ ಸಲ್ಲಿಸಿದರೆ ಮಾತ್ರ ಗೃಹ, ವಾಹನ ಮತ್ತಿತರ ಸಾಲಗಳ ಮೇಲಿನ ಬಡ್ಡಿದರವನ್ನು ಇಳಿಸಲಾಗುತ್ತದೆ. ಆದರೆ ಇದು ‘ಫ್ಲೋಟಿಂಗ್ ರೇಟ್’ ಬಡ್ಡಿದರಕ್ಕೆ ಮಾತ್ರ ಅನ್ವಯವಾಗುತ್ತದೆ.





Post a Comment

0 Comments