ಮೌನ ಮತ್ತು ಸಂವಹನ: ಹೇಳದ ಮಾತು ಕೇಳುವವನೇ ಶ್ರೇಷ್ಠ ಸಂವಹನಕಾರ

ಮಗು ಹುಟ್ಟಿದಾಗ ಅದಕ್ಕೆ ಯಾವುದೇ ಭಾಷೆ ಗೊತ್ತಿರುವುದಿಲ್ಲ. ಆದರೆ ಅದು ಅಳುತ್ತದೆ; ತಾಯಿ ಆ ಅಳುವಿನಲ್ಲೇ ಹಸಿವು, ನೋವು, ಅಸಹಾಯಕತೆ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾಳೆ. ಮಾತುಗಳಿಲ್ಲದಿದ್ದರೂ ಸಂವಹನ ನಡೆಯುತ್ತದೆ. ಬಹುಶಃ ಸಂವಹನದ ಮೊದಲ ಪಾಠವನ್ನು ಮನುಷ್ಯ ತಾಯಿಯಿಂದಲೇ ಕಲಿಯುತ್ತಾನೆ


ಹಾಗಾದರೆ ಸಂವಹನ ಎಂದರೇನು? ಕೇವಲ ಮಾತನಾಡುವುದೇ? ಅಥವಾ ನಮ್ಮ ಮಾತು ಇನ್ನೊಬ್ಬರಿಗೆ ಅರ್ಥವಾಗುವಂತೆ ಮಾಡುವುದು ಮಾತ್ರವೇ? ಡೇಲ್ ಕಾರ್ನೆಗಿಯವರ How to Win Friends and Influence People ಕೃತಿಯಲ್ಲಿಯೇ ಉತ್ತಮ ಸಂವಹನಕ್ಕೆ ಆಲಿಸುವಿಕೆ.  ಹಾರದಂತೆ  ಶೋಭಿಸುತ್ತದೆ . ಎಂದು ತಿಳಿಸಿದ್ದಾರೆ

ಆದರೆ ಇಲ್ಲೊಂದು ಇನ್ನೂ ಆಳವಾದ ಪ್ರಶ್ನೆ ಇದೆ—ಮಾತನಾಡಿದ್ದನ್ನು ಕೇಳುವುದು ಸಂವಹನವಾದರೆ, ಮಾತನಾಡದೇ ಉಳಿದದ್ದನ್ನು ಅರ್ಥಮಾಡಿಕೊಳ್ಳುವುದು ಏನು?

ಏಕೆಂದರೆ ಕೆಲವೊಮ್ಮೆ ಮನುಷ್ಯನ ನಿಜವಾದ ಮಾತು ಅವನ ತುಟಿಗಳಿಂದ ಹೊರಬರುವುದಿಲ್ಲ... ಅವನ ಮೌನದಲ್ಲಿ ಅಡಗಿರುತ್ತದೆ

ಮಾತನಾಡುವುದು ಮಾತ್ರ ಸಂವಹನವಲ್ಲ

ಸಂವಹನ ಎಂದರೆ ಕೇವಲ ಪದಗಳ ವಿನಿಮಯವಲ್ಲ. ಕೆಲವೊಮ್ಮೆ ಇಬ್ಬರು ಮನುಷ್ಯರು ಒಂದೇ ಮನೆಯಲ್ಲಿ, ಒಂದೇ ಬದುಕಿನಲ್ಲಿ ಇದ್ದರೂ ಅವರ ನಡುವೆ ನಿಜವಾದ ಸಂವಹನ ಇರುವುದಿಲ್ಲ. ಮತ್ತೊಂದೆಡೆ, ಒಂದು ಮಾತಿಲ್ಲದ ಕ್ಷಣವೂ ಇಬ್ಬರ ಮನಸ್ಸುಗಳನ್ನು ಹತ್ತಿರ ತರಬಹುದು.

ಅಮೆರಿಕನ್ ಲೇಖಕಿ ಝುಂಪಾ ಲಹಿರಿ ಅವರ A Temporary Matter ಕಥೆಯಲ್ಲಿ ಶೋಭಾ ಮತ್ತು ಶುಕುಮಾರ್ ಎಂಬ ದಂಪತಿಗಳು ಮಗುವನ್ನು ಕಳೆದುಕೊಂಡ ನಂತರ ಭಾವನಾತ್ಮಕವಾಗಿ ದೂರವಾಗುತ್ತಾರೆ. ಒಂದೇ ಮನೆಯಲ್ಲಿ ಇದ್ದರೂ ಅವರ ನಡುವೆ ಮಾತುಗಳು ಕಡಿಮೆಯಾಗುತ್ತವೆ. ವಿದ್ಯುತ್ ಕಡಿತವಾಗುವ ಕತ್ತಲೆಯ ರಾತ್ರಿಗಳಲ್ಲಿ ಅವರು ಪರಸ್ಪರ ಸಣ್ಣ ಸಣ್ಣ ರಹಸ್ಯಗಳನ್ನು ಹೇಳಿಕೊಳ್ಳಲು ಆರಂಭಿಸುತ್ತಾರೆ; ಆ ಕತ್ತಲೆ ಅವರೊಳಗಿನ ಮಾತುಗಳನ್ನು ನಿಧಾನವಾಗಿ ಹೊರಗೆ ತರುತ್ತದೆ.

ಇಲ್ಲಿ ನಮಗೆ ತಿಳಿಯುವುದು—ಒಬ್ಬರೊಂದಿಗೆ ಮಾತನಾಡುವುದು ಮತ್ತು ಒಬ್ಬರನ್ನು ತಲುಪುವುದು ಒಂದೇ ಅಲ್ಲ. ಪದಗಳು ಬಾಯಿಂದ ಹೊರಬರಬಹುದು; ಆದರೆ ಸಂವಹನ ಆಗುವುದು ಅವು ಮತ್ತೊಬ್ಬರ ಹೃದಯವನ್ನು ತಲುಪಿದಾಗ.

ನಮ್ಮ ಬದುಕಿನಲ್ಲಿಯೂ ಹಾಗೆಯೇ. ಮನೆಯಲ್ಲಿರುವ ವ್ಯಕ್ತಿ ದಿನವಿಡೀ ನಮ್ಮ ಜೊತೆ ಮಾತನಾಡುತ್ತಿದ್ದರೂ, ಅವನ ಮನಸ್ಸನ್ನು ನಾವು ಅರ್ಥಮಾಡಿಕೊಂಡಿಲ್ಲದಿದ್ದರೆ ಸಂವಹನ ಅಪೂರ್ಣ. ಮತ್ತೊಂದೆಡೆ, ಒಂದು ನೋಟವೇ “ನಾನು ನಿನ್ನ ಜೊತೆ ಇದ್ದೇನೆ” ಎಂದು ಹೇಳಬಹುದು.

ಮೌನಕ್ಕೂ ಒಂದು ಭಾಷೆಯಿದೆ

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ತಿಮ್ಮಿ, ಸಣ್ಣಬೀರ ಮತ್ತು ಅವರ ಸುತ್ತಲಿನ ಘಟನೆಗಳಲ್ಲಿ ಪಾತ್ರಗಳ ಭಯ, ನೋವು ಮತ್ತು ಅಸಹಾಯಕತೆ ಕೇವಲ ಮಾತುಗಳಿಂದ ಮಾತ್ರ ವ್ಯಕ್ತವಾಗುವುದಿಲ್ಲ. ಸಣ್ಣಬೀರನಿಗೆ ಆಗುವ ಶಿಕ್ಷೆಯ ಸಂದರ್ಭದಲ್ಲಿ ಅವನ ತಾಯಿ ಸೇಸಿಯ ಆತಂಕ, ದೇಹಭಾಷೆ ಮತ್ತು ರೋದನವೇ ಅವಳ ಮನಸ್ಸಿನ ಸ್ಥಿತಿಯನ್ನು ಹೇಳುತ್ತವೆ. ಅವಳು ಹೇಳುವ ಮಾತುಗಳಿಗಿಂತ ಅವಳ ಸ್ಥಿತಿಯೇ ಹೆಚ್ಚು ಮಾತನಾಡುತ್ತದೆ.

ಅದೇ ಮೌನದ ಭಾಷೆ.

ಕೋಪ ಬಂದಾಗ ಮಾತು ನಿಲ್ಲಬಹುದು. ನೋವಾದಾಗ ಮಾತು ಗಂಟಲಲ್ಲೇ ಸಿಲುಕಬಹುದು. ಪ್ರೀತಿ ಇದ್ದಾಗಲೂ ಅದನ್ನು ಹೇಳಲು ಧೈರ್ಯವಿಲ್ಲದಿರಬಹುದು. ಆದರೆ ಮೌನ ಖಾಲಿಯಾಗಿರುವುದಿಲ್ಲ. ಅದು ಹೇಳಲಾಗದ ಮಾತುಗಳ ಸಂಗ್ರಹ.

ಒಂದು ತಾಯಿ ಮಗನ ಮುಖವನ್ನು ನೋಡಿ, “ಏನಾಯಿತು?” ಎಂದು ಕೇಳುವ ಮೊದಲೇ ಅವನ ಕಣ್ಣುಗಳಲ್ಲಿ ಉತ್ತರವನ್ನು ಓದಬಹುದು. ಒಂದು ಸ್ನೇಹಿತ “ಪರವಾಗಿಲ್ಲ” ಎಂದರೂ ಅವನ ಧ್ವನಿಯಲ್ಲಿರುವ ಭಾರವನ್ನು ಮತ್ತೊಬ್ಬ ಸ್ನೇಹಿತ ಗಮನಿಸಬಹುದು.

ಒಂದು ನೋಟವೂ ಒಂದು ವಾಕ್ಯವಾಗಬಹುದು; ಒಂದು ನಿಟ್ಟುಸಿರೂ ಒಂದು ಕಥೆಯಾಗಬಹುದು.

ಮಾತುಗಳ ಹಿಂದೆ ಅಡಗಿರುವ ಸತ್ಯ

ಖಲೀದ್ ಹೊಸೈನಿಯವರ ‘The Kite Runner’ ಕಾದಂಬರಿಯಲ್ಲಿನ ಅಮೀರ್ ಮತ್ತು ಹಸನ್‌ರ ಘಟನೆ ಇದಕ್ಕೆ ಅತ್ಯಂತ ನೋವಿನ ಉದಾಹರಣೆ.

ಗಾಳಿಪಟ ಸ್ಪರ್ಧೆಯ ನಂತರ ಹಸನ್ ಅಮೀರ್‌ಗಾಗಿ ಗಾಳಿಪಟವನ್ನು ತರಲು ಹೋಗುತ್ತಾನೆ. ಅಲ್ಲಿ ಅವನ ಮೇಲೆ ಭೀಕರ ಹಿಂಸೆ ನಡೆಯುವುದನ್ನು ಅಮೀರ್ ನೋಡುತ್ತಾನೆ; ಆದರೆ ಭಯದಿಂದ ಮಧ್ಯಪ್ರವೇಶಿಸುವುದಿಲ್ಲ. ನಂತರ ಹಸನ್ ಕಣ್ಣೀರಿನಿಂದ, ಗಾಯಗೊಂಡ ಸ್ಥಿತಿಯಲ್ಲಿ ಗಾಳಿಪಟವನ್ನು ಹಿಡಿದು ಅಮೀರ್ ಬಳಿಗೆ ಹಿಂದಿರುಗುತ್ತಾನೆ. ಇಬ್ಬರಿಗೂ ಏನಾಗಿದೆ ಎಂಬುದು ಗೊತ್ತಿದೆ; ಆದರೆ ಆ ವಿಷಯದ ಬಗ್ಗೆ ಇಬ್ಬರೂ ಮಾತನಾಡುವುದಿಲ್ಲ.

ಆ ಮೌನವೇ ಮುಂದೆ ಅಮೀರ್‌ನ ಜೀವನಪೂರ್ತಿ ಅಪರಾಧಬೋಧೆಯಾಗಿ ಉಳಿಯುತ್ತದೆ.

ನಮ್ಮ ಬದುಕಿನಲ್ಲೂ “ಪರವಾಗಿಲ್ಲ”, “ಏನಿಲ್ಲ”, “ನಾನು ಚೆನ್ನಾಗಿದ್ದೇನೆ” ಎನ್ನುವ ಮಾತುಗಳ ಹಿಂದೆ ಕೆಲವೊಮ್ಮೆ ದೊಡ್ಡ ನೋವು ಅಡಗಿರುತ್ತದೆ.

ಒಳ್ಳೆಯ ಸಂವಹನಕಾರನು ಪ್ರತಿಕ್ರಿಯೆ   ಮಾತ್ರ ಕೇಳುವುದಿಲ್ಲ ಪ್ರತಿಕ್ರಿಯೆ;  ಹಿಂದೆ ಅಡಗಿರುವ ನುಡಿದ್ವಂದ್ವ ವನ್ನು ಕೇಳುತ್ತಾನೆ.

ಕೇಳುವುದು ಎಂದರೆ ಕಿವಿಯಿಂದ ಮಾತ್ರವಲ್ಲ

ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕಥೆ’ ನಮಗೆ ಸಂವಹನದ ಮತ್ತೊಂದು ಮುಖವನ್ನು ತೋರಿಸುತ್ತದೆ. ತಬರ ನಿವೃತ್ತಿಯಾದ ನಂತರ ತನ್ನ ಪಿಂಚಣಿಗಾಗಿ ಕಚೇರಿಗಳ ಸುತ್ತ ಅಲೆದಾಡುತ್ತಾನೆ. ಇದೇ ಸಮಯದಲ್ಲಿ ಅವನ ಹೆಂಡತಿ ಅಸ್ವಸ್ಥಳಾಗುತ್ತಾಳೆ; ಚಿಕಿತ್ಸೆಗಾಗಿ ಹಣದ ಅಗತ್ಯವಿರುತ್ತದೆ. ಪಿಂಚಣಿ ಬಂದರೆ ಅವಳನ್ನು ಉಳಿಸಬಹುದು ಎಂಬ ನಿರೀಕ್ಷೆಯಲ್ಲಿ ತಬರ ಅಧಿಕಾರಿಗಳ ಮುಂದೆ ಅಂಗಲಾಚುತ್ತಾನೆ. ಆದರೆ ಅವನ ನೋವು ವ್ಯವಸ್ಥೆಯ ಕಿವಿಗೆ ತಲುಪಿದರೂ, ಅವನ ಪರಿಸ್ಥಿತಿ ಯಾರ ಹೃದಯಕ್ಕೂ ತಲುಪುವುದಿಲ್ಲ. ಕೊನೆಗೆ ಹೆಂಡತಿ ಸತ್ತ ನಂತರ ಪಿಂಚಣಿ ಬರುತ್ತದೆ.

ತೇಜಸ್ವಿಯ ಈ ಕಥೆ ಒಂದು ಕಠಿಣ ಪ್ರಶ್ನೆ ಕೇಳುತ್ತದೆ: ಕೇಳಿಸಿಕೊಂಡಿದ್ದೇವೆ ಎಂದರೆ ಅರ್ಥಮಾಡಿಕೊಂಡಿದ್ದೇವೆ ಎಂದರ್ಥವೇ?

ನಮ್ಮ ಕಚೇರಿಯಲ್ಲಿ ಒಬ್ಬ ಸಹೋದ್ಯೋಗಿ ತನ್ನ ಸಮಸ್ಯೆಯನ್ನು ಹೇಳುತ್ತಿದ್ದಾನೆ. ನಾವು ಅವನ ಮಾತುಗಳನ್ನು ಕೇಳುತ್ತಿದ್ದೇವೆ; ಆದರೆ ಮೊಬೈಲ್ ನೋಡುತ್ತಲೇ ಇದ್ದೇವೆ. ಅದು ಕೇಳುವಿಕೆಯೇ?

ಕಿವಿಗೆ ಬಂದ ಮಾತು ಮನಸ್ಸಿಗೆ ತಲುಪಿದಾಗ ಮಾತ್ರ ನಿಜವಾದ ಆಲಿಸುವಿಕೆ ಆರಂಭವಾಗುತ್ತದೆ.

ಶ್ರೇಷ್ಠ ಸಂವಹನಕಾರನು ಮಾತುಗಳನ್ನು ಮಾತ್ರ ಕೇಳುವುದಿಲ್ಲ—ಮಾತನಾಡುತ್ತಿರುವ ಮನುಷ್ಯನನ್ನೇ ಕೇಳುತ್ತಾನೆ.

ಕೆಲವೊಮ್ಮೆ ಸಾನ್ನಿಧ್ಯ ವೇ ಶ್ರೇಷ್ಠ  ಸಂವಹನ

ವೈದ್ಯಕೀಯ ಕ್ಷೇತ್ರದಲ್ಲಿ ಪ್ರಕಟವಾದ The Power of Listening ಎಂಬ ಲೇಖನದಲ್ಲಿ ವಿವರಿಸಲಾದ ನೈಜ ಘಟನೆಯೊಂದು ಇದನ್ನು ಮನಮುಟ್ಟುವಂತೆ ತೋರಿಸುತ್ತದೆ. ಪತಿಯನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದ ಮಹಿಳೆಯೊಬ್ಬರು ವೈದ್ಯರ ಬಳಿ ಬರುತ್ತಾರೆ. ವೈದ್ಯರು ನಿಧಾನವಾಗಿ, “ಹೇಗಿದ್ದೀರಿ?” ಎಂದು ಕೇಳುತ್ತಾರೆ. ಸುಮಾರು 30 ಸೆಕೆಂಡುಗಳ ಮೌನದ ನಂತರ ಆಕೆ ತನ್ನ ಪತಿಯನ್ನು ವಿರಹಸ್ಮರಣೆ ಮಾಡಿಕೊಳ್ಳುತ್ತಿದ್ದಾಳೆ ಎಂಬುದನ್ನು ಹೇಳಲು ಆರಂಭಿಸುತ್ತಾಳೆ. ನಂತರ ಸುಮಾರು 45 ನಿಮಿಷಗಳ ಕಾಲ ತನ್ನ ಪತಿ, ಅವರ ಅನಾರೋಗ್ಯ, ಕೊನೆಯ ದಿನಗಳು ಮತ್ತು ತನ್ನೊಳಗಿನ ನೋವಿನ ಬಗ್ಗೆ ಮಾತನಾಡುತ್ತಾಳೆ. ವೈದ್ಯರು ಆಕೆಯನ್ನು ಆತುರಪಡಿಸದೆ ಕೇಳುತ್ತಿರುತ್ತಾರೆ.

ಆ ವೈದ್ಯರಿಗೆ ಆಕೆಯ ಪತಿಯನ್ನು ಮರಳಿ ತರಲು ಸಾಧ್ಯವಿರಲಿಲ್ಲ. ಯಾವುದೇ ಅದ್ಭುತ ಪರಿಹಾರವೂ ಅವರ ಬಳಿ ಇರಲಿಲ್ಲ. ಆದರೆ ಅವರು ಆಕೆಯ . ತೊಳಲಾಟಕ್ಕೆ ತಾಣ  ವಾದರು

ನಮ್ಮ ಜೀವನದಲ್ಲೂ ಕೆಲವೊಮ್ಮೆ ಇದೇ ಸಾಕಾಗುತ್ತದೆ. ದುಃಖದಲ್ಲಿರುವ ವ್ಯಕ್ತಿಗೆ ತಕ್ಷಣ “ಧೈರ್ಯವಾಗಿರು” ಎಂದು ಹೇಳುವ ಬದಲು ಅವನ ಪಕ್ಕದಲ್ಲಿ ಕುಳಿತುಕೊಳ್ಳಬಹುದು.

ಕೆಲವೊಮ್ಮೆ ಪರಿಹಾರ ಕೊಡುವುದಕ್ಕಿಂತ, ಒಬ್ಬರ ನೋವಿಗೆ ಜಾಗ ಕೊಡುವುದೇ  ಸಂವಹನ.


ಕೆಲವು ಮೌನಗಳು ಒಂದು ಉತ್ತರ

NPRನ “My Unsung Hero” ಸರಣಿಯಲ್ಲಿ ದಾಖಲಾದ ತುಲಿಕಾ ಪ್ರಸಾದ್ ಅವರ ನೈಜ ಅನುಭವ ಇದಕ್ಕೆ ಅದ್ಭುತ ಉದಾಹರಣೆ. 2016ರಲ್ಲಿ ತನ್ನ ಏಳು ವರ್ಷದ, ಮಾತುಗಳಿಂದ ಸಂವಹನ ಮಾಡಲು ಸಾಧ್ಯವಾಗದ ಮಗ ವೇದಾಂತನೊಂದಿಗೆ ಅವರು ಅಂಗಡಿಗೆ ಹೋಗಿದ್ದರು. ಮಗನಿಗೆ ಕಷ್ಟಕರವಾದ ಕ್ಷಣ ಎದುರಾದಾಗ, ಅಲ್ಲಿದ್ದ ಅಪರಿಚಿತ ಮಹಿಳೆಯೊಬ್ಬರು ಮುಂದೆ ಬಂದು ಅವರ ಸಾಮಾನುಗಳನ್ನು ಜೋಡಿಸಲು ಸಹಾಯ ಮಾಡಿದರು, ಬಿಲ್‌ನ್ನೂ ಪಾವತಿಸಿದರು. ಆಕೆಗೆ autism ಇರುವ ಮಗುವಿದೆ ಎಂದು ಹೇಳಿ, “ನನಗೆ ಅರ್ಥವಾಗುತ್ತದೆ” ಎಂದರು.

ನಂತರ ಕಾರಿನವರೆಗೆ ಆಕೆ ತುಲಿಕಾಳ ಜೊತೆ ಒಂದೇ ಒಂದು ಮಾತಿಲ್ಲದೆ ನಡೆದಳು.

ಸಲಹೆ ಇಲ್ಲ. ಪ್ರಶ್ನೆ ಇಲ್ಲ. ಬುದ್ಧಿವಾದ ಇಲ್ಲ. ಕೇವಲ ಜೊತೆಯಾಗಿ ನಡೆದಳು.

ತುಲಿಕಾ ನಂತರ ಆ ಮೌನದಲ್ಲಿ ಒಂದು ಸಾಂತ್ವನದ ಸ್ಪರ್ಶ  ಇತ್ತು ಎಂದು ನೆನಪಿಸಿಕೊಂಡರು.

ನಮ್ಮ ಬದುಕಿನಲ್ಲೂ ಕೆಲವೊಮ್ಮೆ ಯಾರಾದರೂ ದುಃಖದಲ್ಲಿದ್ದಾಗ, “ಏನೂ ಆಗಿಲ್ಲ”, “ಎಲ್ಲವೂ ಸರಿಯಾಗುತ್ತದೆ” ಎಂದು ಹೇಳುವುದಕ್ಕಿಂತ ಅವರ ಪಕ್ಕದಲ್ಲಿ ಕುಳಿತುಕೊಳ್ಳುವುದು ಹೆಚ್ಚು ಅರ್ಥಪೂರ್ಣ.

ಕೆಲವು ಸಂದರ್ಭಗಳಲ್ಲಿ ನಮ್ಮ ಉಪಸ್ಥಿತಿಯೇ ಒಂದು ಮಾತು. ಕೆಲವು ಮೌನಗಳೇ ಒಂದು ಉತ್ತರ.

ಸರಿಯಾದ ಸಮಯದ ಮೌನವೂ ಒಂದು ಮಾತು

ಯಾರಾದರೂ ತಮ್ಮ ಅತ್ಯಂತ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ನಾವು ತಕ್ಷಣ ಮಾತನಾಡಲು ಆರಂಭಿಸುತ್ತೇವೆ—“ಧೈರ್ಯವಾಗಿರಿ”, “ಕಾಲ ಎಲ್ಲವನ್ನೂ ಸರಿಮಾಡುತ್ತದೆ”, “ಎಲ್ಲವೂ ದೇವರ ಇಚ್ಛೆ” ಎಂದು.

ಆದರೆ ಆ ಕ್ಷಣದಲ್ಲಿ ಆ ಮಾತುಗಳಿಗಿಂತ ಒಂದು ಅಪ್ಪುಗೆ, ಭುಜದ ಮೇಲೆ ಒಂದು ಕೈ, ಅಥವಾ ಕೆಲವು ಕ್ಷಣಗಳ ಮೌನ ಹೆಚ್ಚು ಅರ್ಥಪೂರ್ಣವಾಗಬಹುದು. ದುಃಖದಲ್ಲಿರುವ ವ್ಯಕ್ತಿಗೆ ತನ್ನ ನೋವನ್ನು ವಿವರಿಸುವ ಅವಕಾಶ ನೀಡುವುದೂ ಒಂದು ರೀತಿಯ ಸಂವಹನ.

ನಮ್ಮ ಸ್ನೇಹಿತನೊಬ್ಬ ಕಣ್ಣೀರಿನಿಂದ ಕುಳಿತಿದ್ದಾನೆ ಎಂದುಕೊಳ್ಳಿ. “ನೀನು ಹೀಗೆ ಮಾಡಬಾರದಿತ್ತು” ಎಂದು ತಕ್ಷಣ ತೀರ್ಪು ನೀಡುವ ಬದಲು, ಅವನ ಪಕ್ಕದಲ್ಲಿ ಐದು ನಿಮಿಷ ಸುಮ್ಮನೆ ಕುಳಿತುಕೊಳ್ಳಬಹುದು.

ಮಗುವೊಂದು ಪರೀಕ್ಷೆಯಲ್ಲಿ ವಿಫಲವಾಗಿ ಮನೆಗೆ ಬಂದಾಗ, “ನಾನು ಮೊದಲೇ ಹೇಳಿದ್ದೆ” ಎನ್ನುವುದಕ್ಕಿಂತ ಮೊದಲು ಅದರ ಪಕ್ಕದಲ್ಲಿ ಕುಳಿತುಕೊಳ್ಳಬಹುದು.

ಎಲ್ಲಾ ಸಂದರ್ಭಗಳಲ್ಲೂ ಮಾತು ಬೇಕಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಮೌನವೇ ನಾವು ಹೇಳಬಹುದಾದ ಅತ್ಯಂತ ಸೂಕ್ತವಾದ ಮಾತು.

ಕಣ್ಣುಗಳೂ ಮಾತನಾಡುತ್ತವೆ

ಸಂವಹನದ ದೊಡ್ಡ ಭಾಗ ಪದಗಳ ಹೊರಗಡೆಯೇ ನಡೆಯುತ್ತದೆ. ಮುಖಭಾವ, ಕಣ್ಣಿನ ನೋಟ, ದೇಹಭಾಷೆ, ಧ್ವನಿಯ ಏರಿಳಿತ—ಇವೆಲ್ಲವೂ ನಮ್ಮ ಮನಸ್ಸಿನ ಸಂದೇಶಗಳನ್ನು ಹೊತ್ತಿರುತ್ತವೆ.

ಆಸ್ಪತ್ರೆಯಲ್ಲಿ ವೈದ್ಯರು “ಎಲ್ಲವೂ ಸರಿಯಾಗಿದೆ” ಎಂದು ಹೇಳಿದರೂ, ಮಗುವಿನ ಹಾಸಿಗೆಯ ಪಕ್ಕದಲ್ಲಿರುವ ತಾಯಿಯ ಕಣ್ಣುಗಳು ಇನ್ನೊಂದು ಕಥೆ ಹೇಳಬಹುದು. ಕಚೇರಿಯಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ನಗಿಸುತ್ತಿರುವ ಸಹೋದ್ಯೋಗಿ ಒಂದು ದಿನ ಮೌನವಾಗಿದ್ದರೆ, “ಅವನಿಗೆ ಅಹಂಕಾರ ಬಂದಿದೆ” ಎಂದು ತೀರ್ಮಾನಿಸುವ ಮೊದಲು ಅವನ ಮುಖವನ್ನು ಗಮನಿಸಬಹುದು.

ಮಾತು ಒಂದು ಬಾಗಿಲು ಮಾತ್ರ; ಭಾವನೆ ಅದರ ಒಳಗಿನ ಮನೆ.

ಅದನ್ನು ನೋಡಲು ಕಣ್ಣುಗಳಷ್ಟೇ ಸಾಲದು—ಗಮನಿಸುವ ಮನಸ್ಸೂ ಬೇಕು.

ಅರ್ಥಮಾಡಿಕೊಳ್ಳುವ ಮೊದಲು ತೀರ್ಪು ನೀಡಬೇಡಿ

ಹಾರ್ಪರ್ ಲೀ ಅವರ ‘To Kill a Mockingbird’ ಕಾದಂಬರಿಯಲ್ಲಿ ಬೂ ರ್ಯಾಡ್ಲಿ ಎಂಬ ವ್ಯಕ್ತಿಯ ಬಗ್ಗೆ ಮಕ್ಕಳು ಆರಂಭದಲ್ಲಿ ಭಯಾನಕ ಕಲ್ಪನೆಗಳನ್ನು ಹೊಂದಿರುತ್ತಾರೆ. ಅವನನ್ನು ನಿಜವಾಗಿ ಅರಿಯದೆ, ಅವನ ಬಗ್ಗೆ ಊರಿನಲ್ಲಿ ಹರಡಿರುವ ಮಾತುಗಳಿಂದಲೇ ಒಂದು ಚಿತ್ರವನ್ನು ಕಟ್ಟಿಕೊಂಡಿರುತ್ತಾರೆ. ಆದರೆ ನಂತರ ಬೂ ರ್ಯಾಡ್ಲಿ ಮಕ್ಕಳನ್ನು ರಕ್ಷಿಸುವ ವ್ಯಕ್ತಿಯಾಗಿ ಹೊರಹೊಮ್ಮಿದಾಗ, ಅವರು ಅವನ ಬಗ್ಗೆ ಕಟ್ಟಿಕೊಂಡಿದ್ದ ಕಲ್ಪನೆ ತಪ್ಪಾಗಿತ್ತು ಎಂಬುದು ತಿಳಿಯುತ್ತದೆ.

ನಮ್ಮ ಬದುಕಿನಲ್ಲೂ ಇದೇ ತಪ್ಪು ಆಗುತ್ತದೆ.

ಕಚೇರಿಯಲ್ಲಿ ಒಬ್ಬ ಸಹೋದ್ಯೋಗಿ ನಮ್ಮೊಂದಿಗೆ ಮಾತನಾಡದೆ ಹೋದರೆ—“ಅವನಿಗೆ ಅಹಂಕಾರ ಬಂದಿದೆ” ಎಂದುಕೊಳ್ಳಬಹುದು. ಮನೆಯಲ್ಲಿ ಮಗು ಬಾಗಿಲು ಮುಚ್ಚಿಕೊಂಡು ಕುಳಿತರೆ—“ನಮ್ಮ ಮಾತು ಕೇಳುವುದಿಲ್ಲ” ಎಂದು ಕೋಪಗೊಳ್ಳಬಹುದು.

ಆದರೆ ಆ ಮೌನದ ಹಿಂದೆ ದಣಿವು, ನೋವು, ಭಯ ಅಥವಾ ಹೇಳಲಾಗದ ಸಮಸ್ಯೆ ಇರಬಹುದು.

ತೀರ್ಪು ನೀಡುವುದು ಸುಲಭ; ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಕಷ್ಟ.

ಮೌನವನ್ನು ಅರ್ಥಮಾಡಿಕೊಳ್ಳುವುದು ಎಂದರೆ ಅದಕ್ಕೆ ನಮ್ಮದೇ ಅರ್ಥವನ್ನು ಹೇರಿಕೊಳ್ಳುವುದು ಅಲ್ಲ. ಅದರ ಹಿಂದೆ ಇರುವ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವುದು.

ಶ್ರೇಷ್ಠ ಸಂವಹನಕಾರ ಯಾರು?

ಮಗು ಮಾತು ಕಲಿಯುವ ಮೊದಲೇ ತಾಯಿಯೊಂದಿಗೆ ಸಂವಹನ ಮಾಡಿತ್ತು. ಕಾದಂಬರಿಗಳ ಪಾತ್ರಗಳು ತಮ್ಮ ಮೌನದಲ್ಲಿ ನೋವನ್ನು ಹೇಳಿಕೊಂಡವು. ನಿಜ ಜೀವನದಲ್ಲಿ ಅಪರಿಚಿತರ ಮೌನವನ್ನು ಅರ್ಥಮಾಡಿಕೊಂಡವರು ಮತ್ತೊಬ್ಬರ ಬದುಕಿನಲ್ಲಿ ಒಂದು ನೆಮ್ಮದಿಯಾದರು.

ಇವೆಲ್ಲವೂ ಒಂದೇ ಸತ್ಯವನ್ನು ಹೇಳುತ್ತವೆ—

ಸಂವಹನವೆಂದರೆ ಕೇವಲ ಮಾತನಾಡುವ ಕಲೆ ಅಲ್ಲ; ಅರ್ಥಮಾಡಿಕೊಳ್ಳುವ ಕಲೆ.

ನಾವು ದಿನವಿಡೀ ಎಷ್ಟು ಜನರೊಂದಿಗೆ ಮಾತನಾಡುತ್ತೇವೆ! ಆದರೆ ಅವರಲ್ಲಿ ಎಷ್ಟು ಜನರ ಹೇಳದ ಮಾತುಗಳನ್ನು ಗಮನಿಸುತ್ತೇವೆ?

ನಮ್ಮ ಮನೆಯಲ್ಲಿರುವ ವ್ಯಕ್ತಿ “ಏನಿಲ್ಲ” ಎಂದಾಗ, ನಿಜವಾಗಿಯೂ ಏನೂ ಇಲ್ಲವೇ ಎಂದು ಒಮ್ಮೆ ಕೇಳಿದ್ದೇವೆಯೇ?

ಸ್ನೇಹಿತನು ಎಂದಿನಂತೆ ನಗದೆ ಇದ್ದಾಗ, “ಏನಾಯಿತು?” ಎಂದು ಕೇಳಲು ಒಂದು ಕ್ಷಣ ನಿಂತಿದ್ದೇವೆಯೇ?

ನಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಕ್ಕಿದ್ದಂತೆ ಮೌನವಾದಾಗ, ಅದನ್ನು ಅಹಂಕಾರವೆಂದು ತೀರ್ಮಾನಿಸುವ ಮೊದಲು ಅವನ ಮನಸ್ಸಿನೊಳಗೆ ಏನಾಗಿರಬಹುದು ಎಂದು ಯೋಚಿಸಿದ್ದೇವೆಯೇ?

ಬಹುಶಃ ನಮ್ಮ ಸುತ್ತಲೂ ಪ್ರತಿದಿನ ಯಾರೋ ಒಬ್ಬರು ಮಾತನಾಡದೆ ಮಾತನಾಡುತ್ತಿರಬಹುದು. ಅವರಿಗೆ ಬೇಕಾಗಿರುವುದು ದೊಡ್ಡ ಪರಿಹಾರವಲ್ಲ. ಕೆಲವೊಮ್ಮೆ ಕೇವಲ ಒಬ್ಬರು ಗಮನಿಸುವುದು. ಒಬ್ಬರು ಕೇಳುವುದು. ಒಬ್ಬರು ತೀರ್ಪು ನೀಡದೆ ಅವರ ಪಕ್ಕದಲ್ಲಿ ನಿಲ್ಲುವುದು.

ಮಾತುಗಳನ್ನು ಕೇಳುವುದು ಸುಲಭ.
ಮೌನವನ್ನು ಕೇಳಲು ಮನಸ್ಸು ಬೇಕು.

ಹಾಗಾದರೆ ನಾವು ಒಳ್ಳೆಯ ಮಾತುಗಾರರಾಗಲು ಮಾತ್ರ ಪ್ರಯತ್ನಿಸುತ್ತಿದ್ದೇವೆಯೇ?

ಅಥವಾ ನಮ್ಮನ್ನು ಸುತ್ತುವರೆದಿರುವ ಮೌನದ ಧ್ವನಿಯನ್ನೂ ಕೇಳಲು ಕಲಿಯುತ್ತಿದ್ದೇವೆಯೇ?

ಕೊನೆಯಲ್ಲಿ ಪ್ರಶ್ನೆ ಇದಲ್ಲ —

“ನಾನು ಎಷ್ಟು ಚೆನ್ನಾಗಿ ಮಾತನಾಡುತ್ತೇನೆ?”

ಪ್ರಶ್ನೆ ಇದು—

“ನನ್ನ ಎದುರಿನ ಮನುಷ್ಯನು ಹೇಳದೆ ಉಳಿಸಿದ ಒಂದು ಮಾತನ್ನಾದರೂ ನಾನು ಅರ್ಥಮಾಡಿಕೊಂಡಿದ್ದೇನೆಯೇ?”

ಬಹುಶಃ ಅಲ್ಲಿಂದಲೇ ನಿಜವಾದ ಸಂವಹನ ಆರಂಭವಾಗುತ್ತದೆ.

ಮಾತನಾಡುವವನು ವಾಗ್ಮಿಯಾಗಬಹುದು.

ಕೇಳುವವನು ಒಳ್ಳೆಯ ಸಂವಹನಕಾರನಾಗಬಹುದು.

ಆದರೆ ಮೌನವನ್ನು ಅರ್ಥಮಾಡಿಕೊಳ್ಳುವವನು—

ಒಬ್ಬ ಶ್ರೇಷ್ಠ ಮನುಷ್ಯನಾಗುತ್ತಾನೆ.

                                                                                                   - ಅಕ್ಷತ್ ಹೆಗಡೆ

Post a Comment

0 Comments