ಈ ಮೊದಲೇ ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಸರಣಿಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದ್ದರಿಂದ ಬಿಸಿಸಿಐ ಕೊಹಿಲಿಯವರ ಮನವೊಲಿಸಲು ಮುಂದಾಗಿದ್ದು ಈ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಇದೀಗ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ಅಧಿಕೃತವಾಗಿ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ.
2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕೆರಿಯರ್ ಆರಂಭಿಸಿದ್ದ ವಿರಾಟ್ ಕೊಹ್ಲಿ, 2014 ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳಲ್ಲಿ ಆಗಿರುವ ಅವರು 210 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ 16,608 ಎಸೆತಗಳನ್ನು ಎದುರಿಸಿರುವ ಕೊಹ್ಲಿ ಒಟ್ಟು 9230 ರನ್ ಕಲೆಹಾಕಿದ್ದಾರೆ. ಇದರ ನಡುವೆ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ ಕೀರ್ತಿ ಕೊಹ್ಲಿಯವರದ್ದಾಗಿದೆ.
ಅಂತೆಯೇ ಭಾರತ ಟೆಸ್ಟ್ ತಂಡವನ್ನು 68 ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ, ತಮ್ಮ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ 40 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಕೇವಲ 17 ಮ್ಯಾಚ್ಗಳಲ್ಲಿ ಮಾತ್ರ ಸೋಲನ್ನನುಭವಿಸಿದೆ. ಇನ್ನು 11 ಪಂದ್ಯಗಳಲ್ಲಿ ಭಾರತ ತಂಡವು ಡ್ರಾ ಸಾಧಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.
ಇದೀಗ ತನ್ನ 14 ವರ್ಷಗಳ ಟೆಸ್ಟ್ ಕೆರಿಯರಿಗೆ ವಿದಾಯ ಹೇಳಿರುವ ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ 2024 ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಬೆನ್ನಲ್ಲೇ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಯಾನಕ್ಕೆ ವಿದಾಯ ಹೇಳಿದ್ದರು. ಇದೀಗ ದಿಢೀರ್ ಆಗಿ ಟೆಸ್ಟ್ ಕ್ರಿಕೆಟ್ ಪಯಣಕ್ಕೂ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ ನಿವೃತ್ತಿ ಪತ್ರ:
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ ಕ್ಯಾಪ್ ಧರಿಸಿ 14 ವರ್ಷಗಳು ಕಳೆದಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಈ ಪ್ರಯಾಣಕ್ಕೆ ಕರೆದೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ ಮತ್ತು ನಾನು ಜೀವನ ಪರ್ಯಂತ ಸಾಗಿಸುವ ಪಾಠಗಳನ್ನು ಕಲಿಸಿದೆ.
ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಆಳವಾದ ವೈಯಕ್ತಿಕ ಅಂಶವಿದೆ. ಶಾಂತವಾದ ಜಂಜಾಟ, ದೀರ್ಘ ದಿನಗಳು, ಯಾರೂ ನೋಡದ ಸಣ್ಣ ಕ್ಷಣಗಳು. ಇವೆಲ್ಲವೂ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ನಾನು ಈ ಸ್ವರೂಪದಿಂದ ದೂರ ಸರಿಯುತ್ತಿರುವುದು ಸುಲಭದ ನಿರ್ಧಾರವಲ್ಲ. ಆದರೆ ಇದುವೇ ಸರಿ ಎಂದು ಅನಿಸುತ್ತದೆ.
ನಾನು ಹೊಂದಿದ್ದ ಎಲ್ಲವನ್ನೂ ಟೆಸ್ಟ್ ಕ್ರಿಕೆಟಿಗೆ ನೀಡಿದ್ದೇನೆ. ಅಲ್ಲದೆ ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದು ಅದರಿಂದ ನನಗೆ ದಕ್ಕಿದೆ. ನನ್ನೊಂದಿಗೆ ಆಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸುತ್ತೇನೆ. ಅಲ್ಲದೆ ಯಾವತ್ತಿದ್ದರೂ ನಾನು ನನ್ನ ಟೆಸ್ಟ್ ವೃತ್ತಿಜೀವನವನ್ನು ನಗುವಿನೊಂದಿಗೆ ಹಿಂತಿರುಗಿ ನೋಡುತ್ತೇನೆ #269, ಸೈನ್ ಆಫ್. ಎಂದು ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ.
0 Comments