ಮೇ 9 ಮತ್ತು 10ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ 4 ವಾಯುಪಡೆಯ ಕೇಂದ್ರಗಳಲ್ಲಿ ಅದಮ್‌ಪುರವೂ ಒಂದು. ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲ ದಿನಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಇಂದು ಪಂಜಾಬ್‌ನ ಅದಮ್‌ಪುರ ವಾಯುನೆಲೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದರು.
'ಇಂದು ಬೆಳಿಗ್ಗೆ, ನಾನು ಎಎಫ್‌ಎಸ್ ಆದಂಪುರಕ್ಕೆ ಹೋಗಿ ನಮ್ಮ ಧೈರ್ಯಶಾಲಿ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವ ಸೈನಿಕರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ರಾಷ್ಟ್ರಕ್ಕಾಗಿ ನಮ್ಮ ಸಶಸ್ತ್ರ ಪಡೆಗಳು ಮಾಡುವ ಎಲ್ಲ ಸೇವೆ ಮತ್ತು ತ್ಯಾಗಕ್ಕೂ ಭಾರತವು ಅವರಿಗೆ ಶಾಶ್ವತವಾಗಿ ಕೃತಜ್ಞವಾಗಿದೆ' ಎಂದು ಪ್ರಧಾನಿ ತಮ್ಮ ಎಕ್ಸ್ ಖಾತೆ ಮೂಲಕ ಧನ್ಯವಾದವನ್ನು ಸಮರ್ಪಿಸಿದ್ದಾರೆ.
ಪಾಕಿಸ್ತಾನ ಸೇನೆಯ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸಿದ ಯುದ್ಧ ವಿಮಾನ ಪೈಲಟ್‌ಗಳು ಮತ್ತು ತಾಂತ್ರಿಕ ಬೆಂಬಲ ಸಿಬ್ಬಂದಿಯನ್ನು ಪ್ರಧಾನಿ ಮೋದಿ ಭೇಟಿಯಾದರು. ಪ್ರಧಾನಿ ಮೋದಿ ಸ್ವತಃ ವಾಯುಪಡೆಯ ಯೋಧರನ್ನು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಪ್ರಧಾನಿಯವರು ಇಂದು ಬೆಳಿಗ್ಗೆ 7 ಗಂಟೆಗೆ ದೆಹಲಿಯ ಪಾಲಂ ವಾಯುನೆಲೆಯಿಂದ ಆದಂಪುರ್ ವಾಯುನೆಲೆಗೆ ತೆರಳಿದರು. ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ಕೂಡ ಮೋದಿಯವರೊಂದಿಗೆ ಇದ್ದರು. ಪ್ರಧಾನಿ ಮೋದಿ ವಾಯುಪಡೆಯ ಸಿಬ್ಬಂದಿಯೊಂದಿಗೆ ಸುಮಾರು 1 ಗಂಟೆ ಕಾಲ ಕಳೆದರು. ಈ ಸಂದರ್ಭದಲ್ಲಿ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಯೋಧರೊಂದಿಗೆ ನಡೆಸಿದ ಸಂವಾದದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು 'ಬಹಳ ವಿಶೇಷ ಅನುಭವ' ಎಂದು ಕೂಡ ಪ್ರಧಾನಿ ಕರೆದಿದ್ದಾರೆ.
ಆದಂಪುರ ವಾಯುನೆಲೆಯು ವಾಯುಪಡೆಯ ಮಿಗ್ 29 ಯುದ್ಧ ವಿಮಾನಗಳ ನೆಲೆಯಾಗಿದೆ.
0 Comments