ಸರಕಾರವು ಆಹಾರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದು ಆಗಾಗ ಅಂಗಡಿಗಳಿಗೆ ದಾಳಿ ಮಾಡಿ ಆಹಾರ ಪದಾರ್ಥಗಳನ್ನು ಪರೀಕ್ಷೆಗೊಳಪಡಿಸುತ್ತಿದೆ. ಇದೀಗ ಸರ್ಕಾರದ ಕಣ್ಣು ಪನ್ನೀರ್ ಮೇಲೆ ಬಿದ್ದಿದ್ದು ಪನ್ನೀರ್ ಪ್ರಿಯರಿಗೆ ತಲೆಬಿಸಿ ಶುರುವಾಗಿದೆ. ಆಹಾರ ಸುರಕ್ಷತೆ ಕುರಿತು ರಾಜ್ಯದಲ್ಲಿ ಕಾಟನ್ ಕ್ಯಾಂಡಿಯಿಂದ ಹಿಡಿದು ಗೋಬಿ ಮಂಚೂರಿ ಪಾನಿಪುರಿ ಕಬಾಬ್ ಕೇಕ್ ಬಟಾಣಿಗಳಲ್ಲಿ ಇರುವಂತಹ ರಾಸಾಯನಿಕ ಅಂಶಗಳನ್ನು ಆಹಾರ ಗುಣಮಟ್ಟ ಪರೀಕ್ಷೆ ಅಭಿಯಾನದಿಂದ ಪತ್ತೆ ಹಚ್ಚಲಾಗಿದೆ. ಹಾಗೆಯೇ ಇದೀಗ ಪನ್ನೀರ್ ಕುರಿತಾದ ಪ್ರಯೋಗಾಲಯದ ಪರೀಕ್ಷಾ ವರದಿ ಬಂದಿದ್ದು ಇದರಲ್ಲೂ ಕಲಬೆರಕೆ ಆಗಿರುವುದು ಪತ್ತೆಯಾಗಿದೆ. ಅಲ್ಲದೆ ಪನ್ನೀರ್ ಸೇವನೆ ಮಾನವ ಶರೀರಕ್ಕೆ ಅಸುರಕ್ಷಿತ ಎಂಬ ಅಂಶವನ್ನು ಪತ್ತೆಹಚ್ಚಲಾಗಿದ್ದು, ಪನ್ನೀರ್ ಪ್ರಿಯರಿಗೆ ಆತಂಕ ಶುರುವಾಗಿದೆ.
ಕಳೆದ ಕೆಲ ದಿನಗಳಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಸುಮಾರು 163 ಪನ್ನೀರ್ ಮಾದರಿಗಳನ್ನು ಸಂಗ್ರಹಿಸಿದ್ದು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದೆ. ಅವುಗಳಲ್ಲಿ ಕೇವಲ ನಾಲ್ಕು ಮಾದರಿಗಳು ಸುರಕ್ಷಿತ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಇಲಾಖೆ ಉಳಿದ 159 ಮಾದರಿಗಳನ್ನು ಪುನಃ ಪರೀಕ್ಷೆಗೆ ಕಳುಹಿಸಿತ್ತು. ಅವುಗಳಲ್ಲಿ 17 ಮಾದರಿಗಳ ವರದಿ ಬಂದಿದ್ದು ಈ ಪೈಕಿ ಎರಡು ಮಾದರಿ ಅಸುರಕ್ಷಿತ ಎಂದು ಇಲಾಖೆ ಮೂಲಗಳು ಹೇಳಿವೆ. 

ಹಾಲಿನಿಂದ ತಯಾರಿಸಲ್ಪಡುವ ಈ ಪನ್ನೀರ್ನಲ್ಲಿ ರಾಸಾಯನಿಕ ಅಂಶದ ಜೊತೆಗೆ ಬ್ಯಾಕ್ಟೀರಿಯಾ ಸಹ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಈ ಪನ್ನೀರ್ ಮಾದರಿಗಳಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶಗಳು ಕಡಿಮೆಯಿರುವುದು ವರದಿಯಲ್ಲಿ ತಿಳಿದು ಬಂದಿದೆ. ಪನ್ನೀರ್ನಲ್ಲಿ ಪತ್ತೆಯಾಗಿರುವ ಈ ಬ್ಯಾಕ್ಟೀರಿಯಾ ಹೃದಯ ಮತ್ತು ಕಿಡ್ನಿ ಸಮಸ್ಯೆ ಉಂಟು ಮಾಡಲಿದ್ದು, ಇದರಲ್ಲಿ ಬಳಕೆಯಾಗಿರುವ ರಾಸಾಯನಿಕ ಅಂಶವು ಕ್ಯಾನ್ಸರ್ ರೋಗಕ್ಕೆ ಕಾರಣವಾಗಲಿದೆ ಎಂದು ತಿಳಿದು ಬಂದಿದೆ.