ನರೇಂದ್ರ ಮೋದಿ ಅವರ ಎರಡನೇ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್ ದಾಸ್ ಆಯ್ಕೆ

ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎರಡನೇ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೇಂದ್ರ ಸರ್ಕಾರವು ನೇಮಕ ಮಾಡಿದೆ. 
ಆರ್.ಬಿ.ಐ ನ 25ನೇ ಗವರ್ನರ್ ಆಗಿದ್ದ ಶಕ್ತಿಕಾಂತ್ ದಾಸ್ ಅವರು ಡಿಸೆಂಬರ್ 10ರಂದು ನಿವೃತ್ತರಾಗಿದ್ದು, ಅವರ ಸ್ಥಾನಕ್ಕೆ ಸಂಜಯ್ ಮಲ್ಹೋತ್ರ ಅವರನ್ನು ಕೇಂದ್ರ ಸರ್ಕಾರವು ನೇಮಕ ಮಾಡಿದೆ. ಪ್ರಸ್ತುತ ಶಕ್ತಿಕಾಂತ್ ಅವರನ್ನು ಪ್ರಧಾನಿಯವರ ಎರಡನೇ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. 

ತಮಿಳುನಾಡು ಕೇಡರ್ ಐಎಎಸ್ ಅಧಿಕಾರಿಯಾಗಿರುವ ಶಕ್ತಿಕಾಂತ ದಾಸ್ ಅವರು ಸುಮಾರು 42 ವರ್ಷಗಳ ಸೇವಾನುಭವವನ್ನು ಹೊಂದಿದ್ದಾರೆ. ಹಣಕಾಸು, ತೆರಿಗೆ, ಹೂಡಿಕೆ ಹಾಗೂ ಮೂಲ ಸೌಕರ್ಯದಂತಹ ಕ್ಷೇತ್ರದಲ್ಲಿ ವಿಶೇಷ ಅನುಭವವನ್ನು ಹೊಂದಿದ್ದಾರೆ. ಶಕ್ತಿಕಾಂತ ದಾಸ್ 15ನೇ ಹಣಕಾಸು ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಗವರ್ನರ್ ಹುದ್ದೆಯಿಂದ ನಿವೃತ್ತಿಯಾದ ನಂತರ ಕೇಂದ್ರ ಸರಕಾರವು ಪ್ರಧಾನಮಂತ್ರಿಯವರ ಎರಡನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದೆ. ಅವರ ಸೇವಾ ಅವಧಿ ತಕ್ಷಣದಿಂದಲೇ ಆರಂಭವಾಗಲಿದ್ದು, ಮುಂದಿನ ಆದೇಶದವರೆಗೆ ಇರಲಿದೆ ಎಂದು ಅಧಿಕೃತ ಆದೇಶದಲ್ಲಿ ಕೇಂದ್ರ ಸರಕಾರವು ತಿಳಿಸಿದೆ.
ಪ್ರಧಾನಮಂತ್ರಿಯವರ ಮೊದಲನೇ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದು ಅವರೊಡನೆ ಎರಡನೇ ಪ್ರಧಾನ ಕಾರ್ಯದರ್ಶಿಯಾಗಿ ಆರ್ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಕೈಜೋಡಿಸಲಿದ್ದಾರೆ.

Post a Comment

0 Comments